ಗ್ರ್ಯಾಂಡ್ ಬ್ಯಾಂಕ್ಸ್-
	ಅಟ್ಲಾಂಟಿಕ್ ಸಾಗರದ ಆಗ್ನೇಯ ಭಾಗದಲ್ಲಿರುವ ಖಂಡಾಂತರ ಮುಳುಗುದಡದ (ಕಾಂಟಿನೆಂಟಲ್ ಷೆಲ್ಪ) ಒಂದು ಭಾಗ. ನ್ಯೂಫಂಡ್ಲೆಂಡಿನ ಆಗ್ನೇಯದಲ್ಲಿ ಸು. 350 ಮೈ. ದೂರ ಹರಡಿದೆ. ಇದೊಂದು ಅಂತರರಾಷ್ಟ್ರೀಯ ಮೀನುಗಾರಿಕೆ ಕೇಂದ್ರ. ಗ್ರ್ಯಾಂಡ್ ಬ್ಯಾಂಕ್ಸ್‍ನಲ್ಲಿ ಹಲವು ಮುಳುಗುದಡಗಳಿವೆ. ಇವುಗಳಲ್ಲಿ ಮುಖ್ಯವಾದವು ಗ್ರ್ಯಾಂಡ್ ಬ್ಯಾಂಕ್, ಸೇಂಟ್ ಬ್ಯಾಂಕ್ ಮತ್ತು ಗ್ರೀನ್ ಬ್ಯಾಂಕ್. ಈ ದಡಗಳ ಸರಾಸರಿ ಆಳ 30 ಫ್ಯಾದಂ. ಅನೇಕ ಕಡೆಗಳಲ್ಲಿ 100 ಫ್ಯಾದಮುಗಳಿಗಿಂತಲೂ ಹೆಚ್ಚು ಆಳವಾಗಿದೆ. ಇದರ ಸಮೀಪದಲ್ಲೆ ಲ್ಯಾಬ್ರಡಾರ್ ಶೀತೋದಕ ಪ್ರವಾಹವೂ ಗಲ್ಫ ಉಷ್ಣೋದಕ ಪ್ರವಾಹವೂ ಕೊಡುತ್ತವೆ. ಈ ಪರಸ್ಪರ ವಿರುದ್ಧ ಪ್ರವಾಹಗಳ ಕೂಡುವಿಕೆಯಿಂದಾಗಿ ಆಗಿಂದಾಗ್ಗೆ ದಟ್ಟವಾದ ಮಂಜು ಕವಿಯುತ್ತದೆ. ಹೀಗೆ ಶೈತ್ಯ ಉಷ್ಣ ಉದಕಗಳ ಸಂಮಿಶ್ರಣದಲ್ಲಿ ಸೃಷ್ಟಿಯಾಗುವ ಜೀವರಾಶಿ ಮೀನುಗಳಿಗೆ ಒಳ್ಳೆಯ ಆಹಾರ. ಗ್ರ್ಯಾಂಡ್ ಬ್ಯಾಂಕಿನ ಮತ್ಸ್ಯಸಂಪತ್ತನ್ನು ಜಾನ್ ಕ್ಯಾಬಟ್ ನಾಲ್ಕು ಶತಮಾನಗಳ ಹಿಂದೆ ಕಂಡ. ಇಲ್ಲಿ ಕಾಡ್, ಹ್ಯಾಡಕ್, ಗುಲಾಬಿ ಮೀನು, ಪೊಲಾಕ್, ಚಪ್ಪೆಮೀನು, ಹೆರಿಂಗ್, ಕಡಲಮೀನು ಹೇರಳವಾಗಿವೆ. ಇಲ್ಲಿ ಕೆನಡ, ಅಮೆರಿಕ, ಇಂಗ್ಲೆಂಡ್, ಪೋರ್ಚುಗಲ್, ಸ್ಪೇನ್ ಮತ್ತು ಫ್ರಾನ್ಸಿನಿಂದ ಮೀನು ಹಿಡಿಯಲು ಬಲೆದೋಣಿಗಳು ಬರುತ್ತವೆ. ಮೀನುಗಳ ನಿಬಿಡತೆಯನ್ನು ಅಧ್ಯಯನಮಾಡುವ, ಅವುಗಳ ಸಂಖ್ಯೆ ಕ್ಷೀಣಿಸದಂತೆ ರಕ್ಷಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಆಯೋಗವೊಂದು 1949ರಲ್ಲಿ ಸ್ಥಾಪಿತವಾಯಿತು.
(ಎಸ್.ಎನ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ